25/05/2026
ಡಾ ಎಚ್ ಕೆ ಎಸ್ ಸ್ವಾಮಿ.
ಚಿತ್ರದುರ್ಗ, (Indo Times Media) ವಿಶ್ವ ಪರಿಸರ ದಿನಾಚರಣೆ ಆಗಮಿಸುತ್ತಿದ್ದು ಪ್ರತಿ ಜಿಲ್ಲೆಗಳಲ್ಲೂ ಮರಗಳನ್ನ ನೆಟ್ಟು ಪರಿಸರ ಉಳಿಸಿಕೊಳ್ಳುವ ಕೆಲಸ ಮಾಡುತ್ತಿದ್ದರೆ, ಚಿತ್ರದುರ್ಗ ಜಿಲ್ಲೆಯಲ್ಲಿ, ಸರ್ಕಾರಿ ವಿಜ್ಞಾನ ಕಾಲೇಜಿನ ಮುಂಭಾಗದಲ್ಲಿರುವ 200 ಮರಗಳನ್ನ ಕಡಿದು, ಸರ್ಕಾರಿ ಮಹಿಳಾ ಕಾಲೇಜನ್ನ ನಿರ್ಮಾಣ ಮಾಡಲು ಹೊರಟಿರುವುದು ನಿಜಕ್ಕೂ ವಿಚಿತ್ರವಾಗಿದೆ, ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಪರಿಸರದ ಬಗ್ಗೆ ತಿಳುವಳಿಕೆ ನೀಡುವ ಸಂದರ್ಭ ಒದಗಿ ಬಂದಿರುವುದು ಶೋಚನೀಯ ಎಂದು ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷ ಡಾ ಎಚ್ ಕೆ ಎಸ್ ಸ್ವಾಮಿ ಅವರು ವಿವಿಧ ಪರಿಸರ ಸಂಘಟನೆಗಳ ಜೊತೆ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸುತ್ತಾ ಮಾತನಾಡುತ್ತಿದ್ದರು.
200 ಕ್ಕಿಂತ ಹೆಚ್ಚು ಮರಗಳನ್ನ ನಾಶ ಮಾಡಿ, ಅಲ್ಲಿ ಸರ್ಕಾರಿ ಮಹಿಳಾ ಕಾಲೇಜು ಕಟ್ಟಡ ಕಟ್ಟುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ, ಹೆಚ್ಚುತ್ತಿರುವ ತಾಪಮಾನ ಚಿತ್ರದುರ್ಗ ನಗರವನ್ನ ಬಿಸಿಯಾಗಿಸುತ್ತಿದೆ, ಪರಿಸರ ಉಳಿಸಬೇಕಾಗಿದ್ದಂತಹ ಜಿಲ್ಲಾಡಳಿತ, ಕಾಲೇಜು ಶಿಕ್ಷಣ ಇಲಾಖೆ, ಪರಿಸರ ವಿರೋಧಿ ಕೆಲಸ ಮಾಡುತ್ತಿರುವುದು ಶೋಚನೀಯ ಎಂದರು.
ಒಂದು ಸರ್ಕಾರಿ ಕಾಲೇಜಿನ ಮುಂಭಾಗದಲ್ಲಿ ಇನ್ನೊಂದು ಸರ್ಕಾರಿ ಕಾಲೇಜನ್ನ ತೆಗೆಯುವುದರಿಂದ ಎರಡು ಕಾಲೇಜುಗಳಿಗೂ ಸಹ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿಸುತ್ತದೆ ನಂತರ ಯಾವುದಾದರೂ ಒಂದು ಕಾಲೇಜನ್ನ ಮುಚ್ಚ ಬೇಕಾಗುತ್ತದೆ, ಪುರುಷ ವಿದ್ಯಾರ್ಥಿಗಳು ಓದುತ್ತಿರುವಂತ ಕಾಲೇಜಿನ ಮುಂಭಾಗದಲ್ಲಿ ಮಹಿಳಾ ಕಾಲೇಜನ್ನ ತೆಗೆಯುವುದು ಅಷ್ಟು ಸುರಕ್ಷಿತವಲ್ಲ, ಅವು ವಿದ್ಯಾರ್ಥಿಗಳ ಮಧ್ಯೆ ಜಗಳಕ್ಕೆ ಕಾರಣವಾಗುತ್ತದೆ.
ಹಿಂದೆಲ್ಲ ಕಲಾ ಕಾಲೇಜು ಮತ್ತು ವಿಜ್ಞಾನ ಕಾಲೇಜು ಒಟ್ಟಿಗೆ ಇದ್ದಾಗ, ವಿದ್ಯಾರ್ಥಿಗಳ ಮಧ್ಯೆ ಮನಸ್ತಾಪಗಳಾಗಿ, ಜಗಳಗಳಾಗಿ ಅವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಉಪನ್ಯಾಸಕರು ಮತ್ತು ಪ್ರಾಂಶುಪಾಲರು ಹರಸಾಹಸ ಪಡುತ್ತಿದ್ದರು. ಅದೇ ರೀತಿ ಈಗ ಮತ್ತೊಮ್ಮೆ ಸೃಷ್ಟಿಯಾಗುವುದು ಒಳ್ಳೆಯದಲ್ಲ ಎಂದರು.
ಪರಿಸರ ವನ್ಯಜೀವಿ ಸಂರಕ್ಷಣಾ ವೇದಿಕೆ ಅಧ್ಯಕ್ಷರಾದ ಶ್ರೀ ಮಾಲತೇಶ್ ಅರಸ್ ರವರು ಮಾತನಾಡುತ್ತಾ ಈಗಾಗಲೇ ಸರ್ಕಾರಿ ವಿಜ್ಞಾನ ಕಾಲೇಜು ಮತ್ತು ಸರ್ಕಾರಿ ಕಲಾ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಾ ಬರುತ್ತಿದೆ, ಇಂತಹ ಸಂದರ್ಭದಲ್ಲಿ ಮತ್ತೊಂದು ಹೊಸ ಕಾಲೇಜನ್ನ ಅದರ ಮುಂಭಾಗದಲ್ಲಿ ಕಟ್ಟುವುದು ಅನ್ಯಾಯಕರ. ಮಹಿಳಾ ಕಾಲೇಜನ್ನ ಆಯ್ಕೆ ಮಾಡಿರುವ ಸ್ಥಳದ ಅಕ್ಕಪಕ್ಕದಲ್ಲಿ ಖಾಲಿ ಜಾಗಗಳಿದ್ದು ಅಲ್ಲಿ ಅದನ್ನು ನಿರ್ಮಾಣ ಮಾಡಿದರೆ ಪರಿಸರವು ಉಳಿದೀತು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲಕರವೂ ಆಗುತ್ತದೆ ಎಂದರು.
ಕಲಾವಿದರಾದ ಶ್ರೀ ನಾಗರಾಜ್ ಬೇದ್ರೆ ಮಾತನಾಡುತ್ತಾ ಒಂದು ಐತಿಹಾಸಿಕ ಹೆಸರಿರುವ ಕಾಲೇಜಿನ ಮುಂಭಾಗದಲ್ಲಿ ಇನ್ನೊಂದು ಕಾಲೇಜನ್ನು ಕಟ್ಟಿದರೆ, ಅದರಲ್ಲೂ ಬಹು ಮಹಡಿಯ ಕಟ್ಟಡ ಕಟ್ಟಿದರೆ, ಈಗ ಇರುವ ವಿಜ್ಞಾನ ಕಾಲೇಜಿನ ಸೌಂದರ್ಯವೂ ಹಾಳಾಗುತ್ತದೆ ಹಾಗೂ ಮುಂದೆ ಅದರ ಬೆಳವಣಿಗೆಗೆ ಮತ್ತು ವಿಸ್ತಾರಕ್ಕೆ ಅಡ್ಡಿಯಾಗುತ್ತದೆ. ಈಗ ಆಯ್ಕೆಯಾಗಿರುವ ಜಾಗದ ಪಕ್ಕದಲ್ಲಿ ಖಾಲಿ ಜಾಗವಿದ್ದು, ಅಲ್ಲಿ ಆ ಕಾಲೇಜನ್ನ ನಿರ್ಮಾಣ ಮಾಡಿದರೆ, ಎರಡು ಕಾಲೇಜಿನ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಮರಗಳ ಆಶ್ರಯ ದೊರಕುತ್ತದೆ ಎಂದರು.
ಶ್ರೀ ತೇಜ ಮೂರ್ತಿಯವರು ಮಾತನಾಡುತ್ತಾ ಕಾಲೇಜ್ ಕಟ್ಟಲು ಗಣಿಗಾರಿಕೆಯು ಹಣ ಬಳಕೆ ಮಾಡುತ್ತಿದ್ದು, ಅದರ ಉದ್ದೇಶ ಪರಿಸರ ಉಳಿಸುವುದಾಗಿದೆ, ಅದೇ ಹಣದಿಂದ ಮತ್ತೆ ಮರಗಳನ್ನು ಕಡಿಯುವುದು ಗಣಿಕೈಗಾರಿಕೆಯ ಹಣದ ದುರುಪಯೋಗ ಮಾಡಿಕೊಂಡಂತಾಗುತ್ತದೆ. ಅಧಿಕಾರಿಗಳು ಮತ್ತೊಮ್ಮೆ ಸ್ಥಳ ವೀಕ್ಷಣೆ ಮಾಡಿ ಇದರ ಬಗ್ಗೆ ಸಮಗ್ರವಾಗಿ ತನಿಖೆ ಮಾಡಿ, ಮಹಿಳಾ ಕಾಲೇಜನ್ನು ಪಕ್ಕದಲ್ಲಿ ಖಾಲಿ ಇರುವ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಜಾಗದಲ್ಲಿ ಅಥವಾ ಇನ್ನಿತರ ಸೂಕ್ತವಾದ ಜಾಗದಲ್ಲಿ ನಿರ್ಮಾಣ ಮಾಡುವಂತೆ ಒತ್ತಾಯಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ನಿವೃತ್ತ ಪಿ ಎಸ್ ಐ ಶ್ರೀ ನಾಗರಾಜ್, ಹಳೆ ವಿದ್ಯಾರ್ಥಿಗಳ ಸಂಘದ ಸದಸ್ಯರು, ಚಿತ್ರದುರ್ಗ ನಗರದ ನಾಗರಿಕರು, ವಿದ್ಯಾರ್ಥಿನಿಯರು ಹಾಜರಿದ್ದರು