18/05/2026
ಸಚಿನ್ ಸಮಯೋಚಿತ ಸಲಹೆಗಳು....
*************************************
ಸಚಿನ್ ತೆಂಡೂಲ್ಕರ್ ಅಪ್ರತಿಮ ಕ್ರಿಕೆಟ್ ಆಟಗಾರ ಮಾತ್ರವಲ್ಲ. ಅತ್ಯದ್ಭುತ ಚಿಂತಕ ಕೂಡ. ಸಚಿನ್ ಸಮಯೋಚಿತ ಯೋಚನೆಗಳು, ನಿರ್ಧಾರಗಳು ಎಷ್ಟೋ ಗೆಲುವಿಗೆ ಕಾರಣವಾಗಿದೆ. ಆದರೆ ಬೆಳಕಿಗೆ ಬಂದವು ಕೆಲವಷ್ಟೇ. ಧೋನಿಯೊಳಗಿನ ನಾಯಕತ್ವ ಗುಣವನ್ನು ಮೊದಲು ಗುರುತಿಸಿದ್ದೇ ಸಚಿನ್ ಕಂಗಳು ಎಂಬುದು ಅವರ ದೂರದರ್ಶಿತ್ವಕ್ಕೆ ಸಾಕ್ಷಿ. ಇಂತಹ ಸಚಿನ್ ಸಾಧನೆಯ ಜೊತೆಗೆ ಸನ್ನಡತೆಯಿಂದಲೂ ಜನ ಮನ ಗೆದ್ದ ಮಹನೀಯ.
ಸಚಿನ್ ಸಲಹೆಗಳು ಎಷ್ಟೋ ಜನರಿಗೆ ದಾರಿದೀಪವಾಗಿದೆ. ಹಲವರನ್ನು ಬದುಕನ್ನು ತಿದ್ದಿದೆ. ಅಂಥವುಗಳಲ್ಲಿ ಒಂದೆರಡನ್ನು ಇಲ್ಲಿ ದಾಖಲಿಸುತ್ತಿರುವೆ.
ಸಚಿನ್ ತೆಂಡೂಲ್ಕರ್ ಅವರ ಪ್ರೀತಿಪಾತ್ರ ಆಟಗಾರರಲ್ಲೊಬ್ಬರು ಯುವರಾಜ್ ಸಿಂಗ್. ಯುವಿಗೂ ಕೂಡ ಸಚಿನ್ ಆರಾಧ್ಯದೈವ. ಪಾಜಿ ಎಂದೇ ಪ್ರೀತಿಯಿಂದ ಕರೆಯುತ್ತಿದ್ದ ಯುವಿಗೆ ಸಚಿನ್ ಅವರೇ ರೋಲ್ ಮಾಡೆಲ್. ಅವರ ಆಟ ನೋಡುತ್ತಲೇ ಬೆಳೆದ ಯುವಿ ಅವರೊಡನೆ ಆಡಿದ್ದು, ದಾಖಲೆಗಳನ್ನು ಬರೆದದ್ದು ಇವತ್ತಿಗೆ ಇತಿಹಾಸ. ಯುವಿ ಸ್ವಭಾವತಃ ಮುಂಗೋಪಿ. ಕ್ರಿಕೆಟ್ ಟರ್ಮ್ ನಲ್ಲಿ ಹೇಳಬೇಕಂದ್ರೆ ಅಗ್ರೆಸ್ಸಿವ್ ಕ್ರಿಕೆಟರ್. ಆಟದಲ್ಲಿ ಮೊನಚು, ಆತನ ಮಾತಿನಲ್ಲಿಯು ಇತ್ತು. ಎದುರಾಳಿಗಳ ಸ್ಲೆಡ್ಜಿಂಗ್ ಗೆ ಕೆಲವೊಮ್ಮೆ ಬ್ಯಾಟ್ ನಿಂದ, ಇನ್ನು ಕೆಲವೊಮ್ಮೆ ಹರಿತವಾದ ಮಾತಿಂದ ಎದುರೇಟು ಕೊಡುತ್ತಿದ್ದಾತ. ಇಂಥ ಯುವಿ ಹಲವು ಸಂದರ್ಭಗಳಲ್ಲಿ ಒಳ್ಳೆಯ ಆಟ ಆಡುವ ಹೊತ್ತಲ್ಲೇ ವಿಕೆಟ್ ಚೆಲ್ಲಿದಾಗ ತಮ್ಮ frustration ಬ್ಯಾಟ್ ಮೇಲೆ ತೋರಿಸುತ್ತಿದ್ದರು. ಬ್ಯಾಟ್ ಎಸೆಯುವುದು, ಬ್ಯಾಟ್ ಮುರಿಯುವುದು ಅವರ ಕೋಪ ಪ್ರಕಟಿಸುವ ಪರಿಯಾಗಿತ್ತು. ಆಸ್ಟ್ರೇಲಿಯಾ ಪ್ರವಾಸದಲ್ಲೊಮ್ಮೆ ಇದೇ ಘಟನೆ ಪುನರಾವರ್ತನೆಯಾದಾಗ ಸಚಿನ್ ಯುವಿಗೆ ಒಂದು ಮಾತು ಹೇಳಿದರು. Bat is your weapon, respect it. ಅದೇ ನಿನಗೆ ಅನ್ನ, ಹೆಸರು, ಹಣ ಎಲ್ಲವನ್ನು ಗಳಿಸಿ ಕೊಡುತ್ತಿರೋದು. ಅದನ್ನೆಂದು ಅಗೌರವದಿಂದ ನೋಡಬೇಡ ಎಂದರು. ಆ ಬಳಿಕ ಯುವಿ ತಮ್ಮ ನಡವಳಿಕೆಯನ್ನು ಬದಲಿಸಿಕೊಂಡರು. ಸಚಿನ್ ದೊಡ್ಡತನವೇ ಇದಲ್ವಾ... ಸರಿಯಾಗಿ ನೋಡಿದರೆ ಅತಿ ಹೆಚ್ಚು ಬಾರಿ ಶತಕದ ಹೊಸ್ತಿಲಲ್ಲಿ ಅಂಪೈರ್ ಗಳ ತಪ್ಪು ನಿರ್ಣಯಕ್ಕೆ ಬಲಿಯಾದ ಕ್ರಿಕೆಟಿಗ ಅವರು. ಇಂದಿನಂತೆ ಅಂದು ರಿವ್ಯೂ ಚಾನ್ಸ್ ಇದ್ದಿದ್ರೆ ಬಹುಶಃ ಸಚಿನ್ ಶತಕಗಳ ಸಂಖ್ಯೆ ನಿಸ್ಸಂಶಯವಾಗಿ 200 ದಾಟುತ್ತಿತ್ತು.
ಸಚಿನ್ ಅವರ ದೊಡ್ಡತನ ಮತ್ತು ಕ್ರಿಕೆಟ್ ಪ್ರೀತಿಗೆ ಇನ್ನೊಂದು ಉದಾಹರಣೆ ಸಂಜು ಸ್ಯಾಮ್ಸನ್ ಅವರಿಗೆ ನೀಡಿದ ಮಾರ್ಗದರ್ಶನ. ಹೌದು ಪದೇ ಪದೇ ಒಂದಂಕಿ ಮೊತ್ತಕ್ಕೆ ಔಟಾಗುತ್ತ ಕ್ರಿಕೆಟ್ ಕೆರಿಯರ್ ಮುಗಿದೇ ಹೋಯಿತು ಎಂಬ ಹಂತಕ್ಕೆ ತಲುಪಿದ್ದ ಸಂಜು ಸ್ಯಾಮ್ಸನ್ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಸಚಿನ್ ಮೊರೆ ಹೋದರು. ಮುಕ್ತ ಮನಸಿನಿಂದ ಗೈಡ್ ಮಾಡಿದ ಲಿಟ್ಲ್ ಮಾಸ್ಟರ್ ಸರಿಸುಮಾರು ಎರಡು ತಿಂಗಳ ಕಾಲ ಸಂಜು ಅವರ ಆಟವನ್ನು ಮಾನಿಟರ್ ಮಾಡಿದರು. ಅವರ ಕ್ರಿಕೆಟ್ ಪ್ರೀತಿ ಎಂಥದ್ದು ಎಂದರೆ ತಮ್ಮ ಮಗನ ಮದುವೆಯ ದಿನವು ಸಂಜುಗೆ ಕರೆ ಮಾಡಿ ಧೈರ್ಯ ತುಂಬಿದ್ದರು. ಅದರ ಫಲವೆಂಬಂತೆ ಸಂಜು ಸ್ಯಾಮ್ಸನ್ ಅತ್ಯುತ್ತಮ ಆಟಕ್ಕೆ ಮರಳಿದ್ದಲ್ಲದೇ ಬ್ಯಾಕ್ ಟು ಬ್ಯಾಕ್ ಶತಕಗಳೊಡನೆ ಮ್ಯಾನ್ ಆಫ್ ದಿ ಟೂರ್ನಮೆಂಟ್ ಆಗಿದ್ದಲ್ಲದೇ, ಭಾರತೀಯರ ಟಿ20 ಚಾಂಪಿಯನ್ ಆಗಲು ಕಾರಣವಾದರು.
ಇಂತಹ ಹತ್ತು ಹಲವು ಸಂಗತಿಗಳು ಸಚಿನ್ ಅವರ ಲೆಗಸಿ ಮತ್ತು ಬುದ್ಧಿವಂತಿಕೆಗೆ ನಿದರ್ಶನವಾಗಿದೆ.
ಸಚಿನ್ ಅವರನ್ನು ಆರಾಧಿಸುವವರು ಮತ್ತು ವಿರೋಧಿಸುವವರು ತಲೆದೂಗಲೇಬೇಕಾದ ಇಂತಹ ಮತ್ತಷ್ಟು ವಿಷಯಗಳಿದೆ. ಮುಂಬರುವ ಲೇಖನಗಳಲ್ಲಿ ತಿಳಿಸುವೆ.
©ಲೇಖನ👉🏻ಟಿ.ಜಿ.ನಂದೀಶ್, ತೀರ್ಥಹಳ್ಳಿ✍🏻